ಮಾಲ್ಡೀವ್ಸ್
ಹಿಂದೂ ಸಾಗರದಲ್ಲಿರುವ ಒಂದು ಸ್ವತಂತ್ರ ದ್ವೀಪಸ್ತೋಮ. ಸುಮಾರು 2000 ಸಣ್ಣಪುಟ್ಟ ಹವಳದ್ವೀಪಗಳಿಂದ ಕೂಡಿದೆ. ಶ್ರೀಲಂಕಾದ ನೈರುತ್ಯಕ್ಕೆ 675 ಕಿಮೀ. ದೂರದಲ್ಲೂ ಭಾರತದ ದಕ್ಷಿಣಕ್ಕೆ ಸುಮಾರು 595 ಕಿಮೀ ದೂರದಲ್ಲೂ ಇದೆ. ಈ ದ್ವೀಪಸ್ತೋಮದ 220 ದ್ವೀಪಗಳಲ್ಲಿ ಮಾತ್ರ ಜನವಸತಿ ಇದೆ. ಹಿಂದೂ ಸಾಗರದಲ್ಲಿ 764 ಕಿಮೀ ಉದ್ದ ಹಾಗೂ 129 ಕಿಮೀ ಅಗಲ ಪ್ರದೇಶದಲ್ಲಿ ಹರಡಿರುವ ಈ ದ್ವೀಪಸ್ತೋಮದ ಒಟ್ಟು ಭೂಪ್ರದೇಶ 298 ಚಕಿಮೀ. ಜನಸಂಖ್ಯೆ 168,000 (1983 ಅಂ). ರಾಜಧಾನಿ ಮಾಲಿ. ಜನಸಂಖ್ಯೆ 40,000. (1983 ಅಂ.)

	ಭೂಲಕ್ಷಣ : ಮಾಲ್ಡೀವ್ಸ್ ದ್ವೀಪಗಳನ್ನು 19 ಅಟಾಲ್‍ಗಳನ್ನಾಗಿ ವಿಂಗಡಿಸಲಾಗಿದೆ. (ಅಟಾಲ್ ಅಂದರೆ ಸಮುದ್ರದಲ್ಲಿ ಸುತ್ತಲೂ ಚಕ್ರಾಕಾರವಾಗಿ ಬೆಳೆದು ಮಧ್ಯೆ ಆಳವಿಲ್ಲದ ನೀರನ್ನು ಒಳಗೊಂಡ ಹವಳದ ದಿಬ್ಬ). ಈ ಅಟಾಲ್‍ಗಳ ಸುತ್ತಲೂ ಇರುವ ಹವಳದ ದಿಬ್ಬಗಳು ಇಲ್ಲಿಯ ದ್ವೀಪಗಳನ್ನು ಸಮುದ್ರದ ಅಲೆಗಳಿಂದ ರಕ್ಷಿಸುತ್ತವೆ. ಇಲ್ಲಿಯ ಅತ್ಯಂತ ದೊಡ್ಡ ದ್ವೀಪದ ವಿಸ್ತೀರ್ಣ 13 ಚಕಿಮೀ. ಸಮುದ್ರಮಟ್ಟಕ್ಕೆ ಕೇವಲ 1.8 ಮೀ ಎತ್ತರದ ಚಪ್ಪಟೆನೆಲ ಹೊಂದಿರುವ ಸಣ್ಣ ಸಣ್ಣ ದ್ವೀಪಗಳೇ ಹೆಚ್ಚಾಗಿವೆ. ದ್ವೀಪಸ್ತೋಮದ ಅತ್ಯಂತ ಎತ್ತರದ ಭೂಭಾಗವೆಂದರೆ ವಿಲಿಂಗಿಲಿ ದ್ವೀಪದಲ್ಲಿಯ 24 ಮೀ ಎತ್ತರದ ಪ್ರದೇಶ. ದ್ವೀಪಗಳು ಲಗೂನ್‍ಗಳಿಂದ ಸುತ್ತುವರಿಯಲ್ಪಟ್ಟು ಬಿಳಿಯ ಮರಳಿನ ಸಮುದ್ರತೀರ ಹೊಂದಿವೆ. ಹುಲ್ಲು ಮತ್ತು ಉಷ್ಣವಲಯದ ಚಿಕ್ಕ ಗಿಡಗಳಿಂದ ಕೂಡಿರುವ ಈ ದ್ವೀಪಗಳಲ್ಲಿ ತೆಂಗು ಹಾಗೂ ಹಣ್ಣಿನ ಮರಗಳು ಹೇರಳವಾಗಿವೆ.

	ವಾಯುಗುಣ : ಇಲ್ಲಿಯ ಹವಾಗುಣ ಹೆಚ್ಚು ಉಷ್ಣತೆಯಿಂದಲೂ ತೇವಾಂಶದಿಂದಲೂ ಕೂಡಿದ್ದು, ಸರಾಸರಿ ಉಷ್ಣಾಂಶ ಸುಮಾರು 27oಅ. ಇದ್ದು ಉಷ್ಣಾಂಶದ ಏರಿಳಿತಗಳು ಕಡಿಮೆ. ಮಾನ್‍ಸೂನ್ ಮಾರುತಗಳಿಂದ ಈ ದ್ವೀಪದಲ್ಲಿ ಮಳೆಯಾಗುತ್ತದೆ. ಉತ್ತರಭಾಗದಲ್ಲಿ ವರ್ಷಕ್ಕೆ 250 ಸೆಂಮಿ ದಕ್ಷಿಣ ಭಾಗದ ದ್ವೀಪಗಳಲ್ಲಿ 381 ಸೆಂಮೀ ಮಳೆಯಾಗುತ್ತದೆ.

	ಜನಜೀವನ : ಇಲ್ಲಿಯ ಜನರಲ್ಲಿ ಬಹುಪಾಲು ಶ್ರೀಲಂಕಾದಿಂದ ಬಂದ ಸಿಂಹಳೀಯರ ವಂಶಜರು. ಉಳಿದವರಲ್ಲಿ ದಕ್ಷಿಣ ಭಾರತದಿಂದ ವಲಸೆ ಬಂದವರೂ ಅರಬ್ ವ್ಯಾಪಾರಿಗಳು ಮತ್ತು ನಾವಿಕರಿದ್ದಾರೆ. ಎಲ್ಲ ಜನರು ಸುನ್ನಿಪಂಗಡಕ್ಕೆ  ಸೇರಿದ ಮುಸ್ಲಿಮರು. ಇವರು ಸಣ್ಣ ಗಾತ್ರದ ಶಾಂತಸ್ವಭಾವದವರು. ಮೀನುಗಾರಿಕೆ ಪ್ರಮುಖ ಉದ್ಯಮವಾಗಿದ್ದು ಪ್ರತಿದಿನವೂ ಸಾವಿರಾರು ದೋಣಿಗಳಲ್ಲಿ ಜನಸಮುದ್ರಕ್ಕೆ ಹೋಗಿ ಮೀನು ಹಿಡಿಯುತ್ತಾರೆ. ತೆಂಗಿನಮರ ಹಾಗೂ ಇಲ್ಲಿ ಸಿಗುವ ಇತರ ಮರಗಳಿಂದ ತಯಾರಿಸಲಾಗುವ ಈ ದೋಣಿಗಳು ಸುಮಾರು 11 ಮೀ ಉದ್ದ ಮತ್ತು 2.4ರಿಂದ 2.7 ಮೀ ಅಗಲವಿರುತ್ತವೆ. ಪ್ರತಿ ದೋಣಿಯಲ್ಲಿ ಸುಮಾರು 10-12 ಜನ ಕೂರಬಹುದು. ದೋಣಿಗಳು ಹಿಂತಿರುಗಿದ ಬಳಿಕ ಹೆಂಗಸರು ಮೀನುಗಳನ್ನು ಬೆಂಕಿಯಲ್ಲಿ ಸಂಸ್ಕರಿಸುತ್ತಾರೆ. ಜನರ ಆಹಾರ ಮೀನು, ತೆಂಗು, ಅನಾನಸ್, ದಾಳಿಂಬೆ, ಯಾಮ್ ಇತ್ಯಾದಿ. ಅಗತ್ಯಬೀಳುವ ವಸ್ತುಗಳನ್ನು ವಿನಿಮಯ ವ್ಯಾಪಾರದ ಮೂಲಕ ಪಡೆಯುತ್ತಾರೆ. ಶ್ರೀಲಂಕಾದ ಆಡುಭಾಷೆಯಾದ ದಿವೆಹಿ ಇಲ್ಲಿಯ ಅಧಿಕೃತ ಭಾಷೆ. ನ್ಯಾಯಪದ್ಧತಿ ಇಸ್ಲಾಂನ ಶರಿಯತ್ ಕಾನೂನನ್ನು ಆಧರಿಸಿದೆ.

	ವಿದ್ಯಾಭ್ಯಾಸದಲ್ಲಿ ಜನರು ಹೆಚ್ಚು ಪ್ರಗತಿ ಸಾಧಿಸಿಲ್ಲ. ಇಲ್ಲಿ 3 ರೀತಿಯ ಶಾಲೆಗಳಿವೆ. ಸಾಂಪ್ರದಾಯಿಕ ಕೊರಾನಿನ ಶಾಲೆಗಳು. ದಿವೆಹಿ ಮಾಧ್ಯಮದ ಪ್ರಾಥಮಿಕ ಶಾಲೆಗಳು ಮತ್ತು ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳು. 1975ರಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಗಳ ನೆರವಿನಿಂದ ಪೂರ್ಣ ಪ್ರಮಾಣದ ವೃತ್ತಿತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಯಿತು. 1980ರಲ್ಲಿ ನಡೆಸಿದ ಮೂಲ ಶಿಕ್ಷಣದ ಕಾರ್ಯಕ್ರಮದ ಮೂಲಕ ಸುಮಾರು 10,000 ವಯಸ್ಕರಿಗೆ ಶಿಕ್ಷಣ ನೀಡಲಾಯಿತು.

	ಆರ್ಥಿಕತೆ : ಮೀನುಗಾರಿಕೆಯ ಮೇಲೆ ಇಲ್ಲಿಯ ಆರ್ಥಿಕತೆ ಅವಲಂಬಿಸಿದೆ. ಇತರ ಉತ್ಪನ್ನಗಳೆಂದರೆ ಹಲಸು, ತೆಂಗು, ಪರಂಗಿಹಣ್ಣು, ಅನಾನಸ್, ದಾಳಿಂಬೆ, ಯಾಮ್ ಇತ್ಯಾದಿ.  ತಿಲದುಮ್ಮಟಿ ಅಟಾಲಿನಲ್ಲಿ ಉತ್ತಮ ರೀತಿಯ ತೆಂಗಿನ ನಾರು ಸಿಗುತ್ತದೆ. ಇದರಿಂದ ಹಗ್ಗ ಮುಂತಾದವನ್ನು ತಯಾರಿಸುತ್ತಾರೆ.

	ಹಗ್ಗದ ತಯಾರಿಕೆ ಮತ್ತು ಜೊಂಡಿನಿಂದ ಚಾಪೆಗಳ ತಯಾರಿಕೆ ಇಲ್ಲಿಯ ಹೆಂಗಸರ ಮುಖ್ಯ ಕಸಬು. ಇವರು ಸಮುದ್ರತೀರದಿಂದ ಕವಡೆಗಳನ್ನು ಮಾರಾಟಕ್ಕಾಗಿ ಆರಿಸುತ್ತಾರೆ. ಇಲ್ಲಿಂದ ಶ್ರೀಲಂಕಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮೀನನ್ನು ರಫ್ತು ಮಾಡುತ್ತಾರೆ. ತೆಂಗಿನಹಗ್ಗ. ಒಣಕೊಬ್ಬರಿ, ಕವಡೆ, ಹಣ್ಣುಗಳು, ಮೀನು ಆಹಾರ ಇವು ರಫ್ತಾಗುವ ಇದರ ಪದಾರ್ಥಗಳು. ಆಮದು ಮಾಡಿಕೊಳ್ಳುವ ಪದಾರ್ಥಗಳಲ್ಲಿ ಪ್ರಮುಖವಾದವು-ಅಕ್ಕಿ, ಸಕ್ಕರೆ. ಇತರ ಆಹಾರ ಪದಾರ್ಥಗಳು, ಹೊಗೆಸೊಪ್ಪು, ಪೆಟ್ರೋಲಿಯಮ್ ಉತ್ಪನ್ನಗಳು. ಯಂತ್ರಗಳು ಇತ್ಯಾದಿ. ಶ್ರೀಲಂಕಾ ಇದರ ಪ್ರಮುಖ ವ್ಯಾಪಾರಿ ಪಾಲುದಾರ. ಮೀನುಗಾರಿಕೆ ಜೊತೆಗೆ ವಿದೇಶಿ ವಿನಿಮಯ ತರುವ ಮತ್ತೊಂದು ಬಾಬ್ತು ಪ್ರವಾಸೋದ್ಯಮ. ಮುಖ್ಯ ಪ್ರವಾಸಿ ಆಕರ್ಷಣೆಯೆಂದರೆ ಬಿಳಿಬಣ್ಣದ ಮರಳಿರುವ ಸಮುದ್ರತೀರ ಮತ್ತು ಬಣ್ಣಬಣ್ಣದ ಹವಳದ ದಿಬ್ಬಗಳು. 1981ರಲಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಒಂದು ಸಲಹಾ ಮಂಡಳಿಯನ್ನು ಸ್ಥಾಪಿಸಲಾಗಿದೆ.

	ಮಾಲ್ಡೀವ್ಸ್, ಶ್ರೀಲಂಕಾ, ಭಾರತ ಮತ್ತು ಸಿಂಗಪುರಗಳ ನಡುವೆ ಕ್ರಮಬದ್ಧವಾದ ಹಡಗಿನ ಸಂಚಾರವಿದೆ. ಇಲ್ಲಿಯ ದ್ವೀಪಸ್ತೋಮದ ದ್ವೀಪಗಳ ನಡುವೆ ಹಾಯಿದೋಣಿಗಳ ಸಂಚಾರವಿದೆ. ಮಾಲ್ಡೀವ್ಸ್ ಅಂತಾರಾಷ್ಟ್ರೀಯ ವಿಮಾನ ಸಂಸ್ಥೆ ಮಾಲಿ ಹಾಗೂ ಕೊಲಂಬೋಗಳ ನಡುವೆ ಮತ್ತು ಮಾಲಿ ಹಾಗೂ ತಿರುವನಂತಪುರ ನಡುವೆ ವಾಯುಯಾನ ಸೌಲಭ್ಯವನ್ನು ಏರ್ಪಡಿಸಿದೆ.

	ಆಡಳಿತ : ಮಾಲ್ಡೀವ್ಸ್ ಗಣರಾಜ್ಯದಲ್ಲಿ ಅಧ್ಯಕ್ಷೀಯ ಪದ್ಧತಿ ಆಡಳಿತವಿದೆ. ಅಧ್ಯಕ್ಷ ಮಜಲೀಸ್ ಶಾಸನಸಭೆಯ ಸದಸ್ಯರಿಂದ 5 ವರ್ಷಗಳ ಅವಧಿಗೆ ಚುನಾಯಿಸಲ್ಪಡುತ್ತಾನೆ. ಮಜಲೀಸ್‍ನಲ್ಲಿ 48 ಸದಸ್ಯರಿದ್ದು ಅದರಲ್ಲಿ 40 ಜನ ಸದಸ್ಯರು 5 ವರ್ಷದ ಅವಧಿಗೆ ವಯಸ್ಕ ಮತದಾನ ಪದ್ಧತಿಯನುಸಾರ ಚುನಾಯಿತರಾಗುತ್ತಾರೆ. ಇಬ್ಬರು ಸದಸ್ಯರನ್ನು ರಾಜಧಾನಿಯಾದ ಮಾಲಿಯಿಂದ ಮತ್ತು ಉಳಿದ 38 ಮಂದಿಯನ್ನು 19 ಅಟಾಲ್‍ಗಳಿಂದ ಪ್ರತಿ ಅಟಾಲ್‍ಗೆ ಇಬ್ಬರಂತೆ ಚುನಾಯಿಸಲಾಗುತ್ತದೆ. ಉಳಿದ 8 ಸದಸ್ಯರನ್ನು ಅಧ್ಯಕ್ಷ ನಾಮಕರಣ ಮಾಡುತ್ತಾನೆ. ಅಧ್ಯಕ್ಷನಿಗೆ ಕ್ಯಾಬಿನೆಟ್ ದೇಶದ ಆಡಳಿತದಲ್ಲಿ ನೆರವಾಗುತ್ತದೆ. ಪ್ರತಿ ಅಟಾಲ್‍ನಲ್ಲಿ ಒಂದು ಚುನಾಯಿತ ಸಮಿತಿಯಿದ್ದು ಸ್ಥಳೀಯ ಆಡಳಿತದ ಉಸ್ತುವಾರಿ ನೋಡಿಕೊಳ್ಳುತ್ತದೆ. ರಾಜಧಾನಿ ನೇರವಾಗಿ ಕೇಂದ್ರ ಸರ್ಕಾರದ ಆಡಳಿತಕ್ಕೊಳಪಟ್ಟಿದೆ. ದೇಶದಲ್ಲಿ ಯಾವ ರಾಜಕೀಯ ಪಕ್ಷಗಳೂ ಇಲ್ಲ.

	ಇತಿಹಾಸ : 16ನೆಯ ಶತಮಾನದಲ್ಲಿ ಪೋರ್ಚುಗೀಸರ ಆಡಳಿತಕ್ಕೊಳಪಡುವ ಮೊದಲಿನ ಇತಿಹಾಸದ ಬಗ್ಗೆ ವಿವರಗಳು ಲಭ್ಯವಿಲ್ಲ. ಪೋರ್ಚುಗೀಸರು 1518ರಿಂದ ಅನೇಕ ಬಾರಿ ಈ ದ್ವೀಪಸ್ತೋಮವನ್ನು ಬಲಾತ್ಕಾರದಿಂದ ವಶಪಡಿಸಿಕೊಳ್ಳಲು ಯತ್ನಿಸಿದರು. ಅನಂತರ ಮೋಪ್ಲಾ ಕಡಲ್ಗಳ್ಳರಿಂದ ಪದೇ ಪದೇ ದಾಳಿ ನಡೆದಾಗ 1645ರಲ್ಲಿ ಸಿಂಹಳದ್ವೀಪದ (ಶ್ರೀಲಂಕಾ) ಆಡಳಿತಗಾರರ ರಕ್ಷಣೆ ಪಡೆಯಲು ಗೌರವ ಕಾಣಿಕೆ ಸಲ್ಲಿಸಲು ಪ್ರಾರಂಭವಾಯಿತು. 1656ರಿಂದ 1796ರ ತನಕ ಸಿಂಹಳದಿಂದ ಡಚ್ಚರು ಈ ದ್ವೀಪಸ್ತೋಮವನ್ನು ಆಳುತ್ತಿದ್ದರು. 1897ರಲ್ಲಿ ಮಾಲ್ಡೀವ್ಸ್ ಅಧಿಕೃತವಾಗಿ ಬ್ರಿಟಿಷ್ ರಕ್ಷಿತ ಪ್ರದೇಶವಾಯಿತು. ಆಗ ಮಾಲ್ಡೀವ್ಸ್ ಆಂತರಿಕ ಸ್ವಪ್ರಭುತ್ವ ಹೊಂದಿತ್ತು. ಬ್ರಿಟನ್ ವಿದೇಶೀ ವ್ಯವಹಾರವನ್ನು ನೋಡಿಕೊಳ್ಳುತ್ತಿತ್ತು. 1950ರಲ್ಲಿ ಗಾನ್ ದ್ವೀಪದಲ್ಲಿ ವಾಯುನೆಲೆಯನ್ನು ಸ್ಥಾಪಿಸುವ ಬಗ್ಗೆ ಮಾಲ್ಡೀವ್ಸ್ ಮತ್ತು ಬ್ರಿಟಿಷರ ನಡುವೆ ವಿವಾದವುಂಟಾಗಿ ದಕ್ಷಿಣಭಾಗದ ಮೂರು ಅಟಾಲ್‍ಗಳು ಪ್ರತ್ಯೇಕಗೊಂಡವು. ಮಾಲ್ಡೀವ್ಸ್ ಸರ್ಕಾರ ಬ್ರಿಟಿಷರು ದಂಗೆಗೆ ಬೆಂಬಲಕೊಟ್ಟರೆಂದು ಆರೋಪಿಸಿತು. 1960ರಲ್ಲಿ ದಂಗೆಯನ್ನು ಅಡಗಿಸಲಾಯಿತು.

	1960ರಲ್ಲಿ ಬ್ರಿಟನ್ ಹಾಗೂ ಮಾಲ್ಡೀವ್ಸ್ ನಡುವೆ ಆದ ಒಪ್ಪಂದದಂತೆ ಗಾನ್ ದ್ವೀಪದ ವಾಯುನೆಲೆಯನ್ನು ಸ್ವತಂತ್ರವಾಗಿ ಉಪಯೋಗಿಸಲು ಬ್ರಿಟನ್‍ಗೆ ಅನುಮತಿ ಕೊಡಲಾಯಿತು. ಬ್ರಿಟನ್ ಮಾಲ್ಡೀವ್ಸ್ ಸ್ವತಂತ್ರವಾಗಿ ವಿದೇಶ ವ್ಯವಹಾರ ನಡೆಸಲು ಅವಕಾಶ ನೀಡಿತು ಹಾಗೂ ಆರ್ಥಿಕ ಅಭಿವೃದ್ಧಿಗೆ ಎರಡು ದಶಲಕ್ಷ ಡಾಲರುಗಳ ನೆರವು ನೀಡಲು ಒಪ್ಪಿಕೊಂಡಿತು. 1965ರ ಜುಲೈ 26ರಂದು ಮಾಲ್ಡೀವ್ಸ್ ಸಂಪೂರ್ಣ ಸ್ವಾತಂತ್ರ್ಯ ಪಡೆಯಿತು. 1968ರ ನವೆಂಬರ್‍ನಲ್ಲಿ ಗಣರಾಜ್ಯವಾಯಿತು. 1976ರಲ್ಲಿ ಗಾನ್ ದ್ವೀಪದಲ್ಲಿಯ ವಾಯುನೆಲೆಯ ಮೇಲಿನ ಅಧಿಕಾರವನ್ನೂ ಬ್ರಿಟನ್ ಬಿಟ್ಟುಕೊಟ್ಟಿತು. ಮಾಲ್ಡೀವ್ಸ್ 1965 ಸೆಪ್ಟೆಂಬರ್ 21ರಂದು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಯಿತು. 
                                                                         (ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ